Tuesday, October 29, 2019

---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

WOn First prize in PRAJA PRAGATHI(DAILY) on the Deepavali Occation -2019
*************************************************************
---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಆ ಕಾಡು ಬಂಡೆಯ ಮೇಲೆ
ನಾಗರಗಳು ಮೂಡಿದ್ದವು.
ನಿಸ್ತೇಜನಾಗಿ ನೋಡುತ್ತಲಿದ್ದೆ ನೋಡುತ್ತಲೆ ಇದ್ದೆ...
ಚಾಂಚಲ್ಯದಲ್ಲಿ ಜಡವಾಗಿ ಜಡದಲ್ಲಿ ಚಂಚಲಿಸಿ
ಮೋಡದಲ್ಲಿ ಅಗ್ನಿಯಾಗಿ ಅಗ್ನಿಯಲ್ಲಿ
ಮಳೆ ಹುಟ್ಟಿದಂತಾಯಿತು !

ನಾಗರಗಳು ಪ್ರೇಮಿಸ ಹತ್ತಿದವು-
ಪ್ರೇಮದ ಉತ್ತುಂಗ ಶಿಖರವನು ಏರಿದವು
ಬಿಸಿಲೇರಿದಂತೆ ಮಿಥುನದ ಪ್ರಮಾಣವೂ
ಹೆಚ್ಚಾಯಿತು!
ಕಣ್ಣು ತಿಕ್ಕಿ ಕೊಳ್ಳುವಷ್ಟರಲ್ಲಿ
ಅಲ್ಲಿ ನಾಗರಗಳಿರಲಿಲ್ಲ!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಮನದ ಒಡೆದ ಬಿಂಬ
ಮುಂದೆ ನಿಂತು ಆತ್ಮ ಸಾಕ್ಷಿಯಂತಾಯಿತು!
ಕಣ್ಣ ಮುಂದಿರುವ ಸತ್ಯ ಮಿಥ್ಯದಂತೆ ಕಂಡು
ಜಾಣ ಕುರುಡು ತೋರಿಸಿ ಅನುಕೂಲ ಸಿಂಧುವಿನಂತೆ
ಮೆರೆದು-‘ಬದುಕೆಂದು ಬರಡು’!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಬೆಂಕಿಯ ಕೆನ್ನಾಲಿಗೆಗೆ
ಧಗ ಧಗಿಸಿ ಹೊತ್ತಿ ಉರಿದು ಸುಟ್ಟು ಭಸ್ಮವಾಯಿತು!
ಉಸಿರು ತಿರುಗಿಸಿಕೊಳ್ಳುವಷ್ಟರಲ್ಲಿ
ಬೂದಿಯಿಂದ ಜೀವ ಅವಿರ್ಭವಿಸಿ ಆಶ್ಚರ್ಯವಾಯಿತು!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

No comments: