Thursday, April 2, 2009

ಲಂಕೇಶ ರ ’ಹುಳಿಮಾವಿನಮರ’ ಮತ್ತು ನಾನು


"ಉಳಿದಿರುವ ಕಾಲ ಎಷ್ಟೋ ಗೊತ್ತಿಲ್ಲ.ಒಂದು ಕಣ್ಣು ಮುಚ್ಚಿಹೋಗಿರುವಾಗ,ಹೊರಗೆ ತುಂತುರು ಹನಿ ಬಿಳುತ್ತಿರುವ ಈ ಆಗಷ್ಟ್ ತಿಂಗಳ ಕೊನೆಯಲ್ಲಿ ಯಾವ ಪಂಕ್ತಿಯೊಂದಿಗೆ ಇದನ್ನು ಮುಗಿಸಲಿ ಎಂದು ನೋಡುತ್ತಿದ್ದೇನೆ.ಆ ಪರಿಣಾಮ ಕಾರಿ ಮಾತುಗಳೂ ಅನಗತ್ಯ.ಇಷ್ಟಕ್ಕೆ ಸುಮ್ಮನಾಗುತ್ತಿದ್ದೇನೆ."--ಇದು ಲಂಕೇಶ್.
ನಾನು ಕನ್ನಡ ಸಾಹಿತ್ಯದ ಓದು ಪ್ರಾರಂಭ ಮಾಡಿದ್ದು ಕುವೆಂಪು ಅವರ ಕವನಗಳಿಂದ.ನಂತರ ಹೊರಳಿದ್ದು ಲಂಕೇಶ್ ಮತ್ತು ಕರ್ನಾಡ ರ ಬರಹಗಳಿಗೆ.ಇವರಿಬ್ಬರನ್ನು ನನಗೆ ಪರಿಚಯಿಸಿದ್ದು ನನ್ನ ಅಪ್ಪ.’ಅಕ್ಕ’ ಲಂಕೆಶ್ ರ ಕಾದಂಬರಿ ಓದಿ ಮುಗಿಸಿದಾಗ ನಾನು ಇಂಜಿನಿಯರಿಂಗ್ ನ ಎರಡನೇ ವರ್ಷ ದಲ್ಲಿದ್ದೆ.ಅದಾದ ನಂತರ ’ನನ್ನ ತಂಗಿಗೆ ಒಂದು ಗಂಡು ಕೊಡಿ’,’ತೆರೆಗಳು’ - ಹೀಗೆ ಒಂದಾದ ಮೇಲೆ ಒಂದು ಲಂಕೇಶ್ ರ ನಾಟಕ, ಕಾದಂಬರಿ ಯನ್ನು ಓದಿ ಮುಗಿಸಿದೆ.ಇದರ ಮಧ್ಯದಲ್ಲೇ ಲಂಕೇಶ್ ರ ಆತ್ಮಕಥನ ’ಹುಳಿಮಾವಿನ ಮರ’ ಬಿಡುಗಡೆ ಆಗಿತ್ತು.ಆದರೆ ನನಗೆ ಇದನ್ನು ಮಾತ್ರ ಓದಲು ಆಗಿರಲಿಲ್ಲ.ಮೊನ್ನೆ ಆಮೇರಿಕಾ ಕ್ಕೆ ಹೋಗುವಾಗ ’ಹುಳಿಮಾವಿನ ಮರ’ ಮತ್ತು ಭೈರಪ್ಪ ನವರ ’ಗ್ರಹಣ’ ಎರಡನ್ನೂ ತೆಗೆದುಕೊಂಡು ಹೋಗಿದ್ದೆ.ವಾಪಸಗುವ ಹೊತ್ತಿಗೆ ಇವೆರಡನ್ನು ಮುಗಿಸಿದ್ದೆ.ಆದರೇ ಲಂಕೇಶ್ ರ ’ಹುಳಿಮಾವಿನ ಮರ’ ನನ್ನ ಕಾಡುತ್ತಲೇ ಇತ್ತು.ನನಗೆ ಅವರ ಬರಹ ಗಳು ಕಾಡುವ ತೀವ್ರತೆ ಯಲ್ಲೆ ಅವರ ಆತ್ಮಕಥನ ವೂ ಕಾಡಿತ್ತು.
ಈ ಆತ್ಮಕಥನ ಓದುವ ವರೆಗೂ ಅದರ ಹೆಸರಿನ ಬಗ್ಗೆ ಒಂದು ಕುತೂಹಲ ವಿತ್ತು.ಆದರೇ ಲಂಕೆಶ್ ಮುನ್ನುಡಿಯಲ್ಲೇ ಅದನ್ನು ಸ್ಪಷ್ಟಪಡಿಸುತ್ತಾರೆ.ದೈತ್ಯವಾಗಿ ಬೆಳೆಯುತ್ತಾ ತನ್ನ ಹೂವು,ಕಾಯಿ,ಹಣ್ಣು ಗಳಿಂದ ಲೇ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಾ,ನೂರಾರು ವರ್ಷ ಬಾಳಿ ಕೊನೆಗೆ ಒಮ್ಮೆ ಮಣ್ಣಾಗಿ ಹೊದರೂ ಅದರ ಅಳಿದುಳಿದ ಬೊಡ್ಡೆ,ಕತ್ತರಿಸಿದ ಕೊಂಬೆ ಇನ್ನೋ ಲಂಕೇಶ್ ರಿಗೆ ಕುತೂಹಲ ವಾಗಿದ್ದವೂ.ಹೀಗೆ ಹೇಳುತ್ತಲೇ ತಮ್ಮ ಆತ್ಮ ಕಥನವನ್ನು ಪ್ರಾರಂಭಿಸುತ್ತಾರೆ,ಲಂಕೇಶ್. ನಿಜವಾಗಿಯೂ ಹೇಳುತ್ತೇನೆ ಎಲ್ಲಿ ಪುಸ್ತಕ ವನ್ನು ಗಟ್ಟಿಯಾಗಿ ಅದುಮಿ ಹಿಡಿದರೆ ಅದನ್ನು ಓದುವ ಸ್ವಾರಸ್ಯ ಕರಗಿ ಹೋಗುತ್ತೋ ಎನ್ನುವಂತೆ ಮೆತ್ತಗೆ ಹಿಡಿದು ಮೆತ್ತಗೆ ಪುಟಗಳನ್ನು ತಿರುವುತ್ತಾ ಓದಿದ್ದೇನೆ.ಮಾವಿನ ಮರದಂತೆ ವಾಟೆ,ಸಸಿ,ಗಿಡ ಮತ್ತು ಮರ ಎನ್ನುವಂತೆ ವಿವಿಧ ರೀತಿಯಲ್ಲಿ ತಮ್ಮ ಜೀವನ ದ ಘಟನೆ ಗಳನ್ನು ದಾಖಲಿಸುತ್ತಾ ಹೋಗುತ್ತಾರೆ.ಬದುಕು ಕೊನಗವಳ್ಳಿ ಯಿಂದ ಸಾಗಿ,ಶಿವಮೊಗ್ಗೆಗೆ ಬಂದು,ಅಲ್ಲಿಂದ ಮೈಸುರ್ ಗೆ ಹೋಗಿ ಅಲ್ಲಿಂದ ಮತ್ತೆ ಶಿವಮೊಗ್ಗೆ ಗೆ ಬಂದು ಮತ್ತೆ ಅಲ್ಲಿಂದ ಬೆಂಗಳೂರಿಗೆ ಬಂದು ನಿಲ್ಲುತ್ತದೆ.ಲಂಕೇಶ್ ರ ಆತ್ಮಕಥ ನ ಓದುವಾಗಿ ಒಂದು ಕಾಲ ದ ರಾಜಕೀಯ ಹೋರಾಟ ಗಳೇ ಇಲ್ಲಿ ಬಂದು ಹೋಗುತ್ತವೆ.ಗೋಪಾಲ ಗೌಡರು,ಬಸಲಿಂಗಪ್ಪ ನವರು,ಹೆಗಡೆ,ನಂಜುಡ ಸ್ವಾಮಿ..ಹೀಗೆ ಎಲ್ಲರ ಸಂಪರ್ಕ ಒಂದಲ್ಲಾ ಒಂದು ರೀತಿಯಲ್ಲಿ ಲಂಕೇಶ್ ರಿಗೆ ಬಂದು ಹೋಗುತ್ತವೆ.ಅಷ್ಟೇ ಅಲ್ಲದೆ ಒಂದು ಕಾಲದ ಸಾಂಸ್ಕೃತಿಕ ಮತ್ತು ಕನ್ನಡ ಭಾಷೆಯ ನಾಡಿಗಳಲ್ಲೂ ಲಂಕೇಶ್ ರನ್ನು ಕಾಣುತ್ತೇವೆ.ಅವರ ಸಿನಿಮಾ ಮಾಡುವ ಗೀಳು,ಭಾಷೆ ಯ ಬಗೆಗೆ ಅವರಿಗಿದ್ದ ಉಗ್ರ ಅಭಿಮಾನ ,ನಾಟಕ,ಹೀಗೆ ಎಲ್ಲಾ ತೆರೆನಾದ ಆ ಸಂದರ್ಬ ದ ನಾಡಿಮಿಡಿತವೆನ್ನುವಂತೆ ಲಂಕೇಶ್ ಆಗಿ ಬಿಡುತ್ತಾರೆ.ಎಲ್ಲಕಿಂತ ಮಿಗಿಲಾಗಿ ನನ್ನನ್ನ ಕಾಡಿದ್ದು ಅಂದರೆ ಹೀಗೆ ಬದುಕ ಬೇಕು ಅನ್ನದೆ ಧಗ ಧಗ ನೇ ಉರಿಯುವಂತೆ ಬದುಕಿ ಇರುವ ಸಮಯದಲ್ಲೆ ತೀವ್ರವಾಗಿ ಸಾಧಿಸಿ ಹೋದ ಲಂಕೇಶ್.ಅವರ ಆತ್ಮಕಥನ ವನ್ನು ಓದುತ್ತಲೇ ಇದನ್ನು ಇನ್ನೆಷ್ಟು ಪರಿಣಾಮಕಾರಿಯಾಗಿ ಮುಗಿಸಬಹುದು ಎನ್ನುವ ಕುತೂಹಲ ನನಗಿತ್ತು.ಸುಮ್ಮನೆ ನೋಡುವದರಲ್ಲಿ ಮೇಲೆ ಹೇಳಿದ ಅವರೇ ಹೇಳಿದ ಮಾತುಗಳು ಪರಿಣಾಮಕಾರಿಯಾಗಿ ಕಾಣದಿದ್ದರೂ - "ಇಷ್ಟೆಲ್ಲಾ ಹೇಳಿದಿನಿ ನನ್ನ ಬದುಕೇ ನಿಮಗೆ ಒಂದು ಎಚ್ಚರಿಕೆ ಅದೇ ಒಂದು ಗೈಡ್ ಎನ್ನುವಂತೆ ಮುಗಿಸುತ್ತಾರೆ ಲಂಕೇಶ್.ಇಷ್ಟಕ್ಕಿಂತ ಪರಿಣಾಮಕಾರಿ ಇನ್ಯವುದೇ ವಾಕ್ಯ ಕೊಡಲು ಸಾಧ್ಯವಿಲ್ಲ!