Sunday, December 22, 2019

Published in 25th Dec Mangala
*************************************************************
ಆಸ್ಪೋಟ

ಬೆಟ್ಟದ ತುದಿಯೇರಲು
ಆಸೆ ಪಟ್ಟು ಬೆಟ್ಟದ ತಪ್ಪಲಲ್ಲಿ ನಿಂತು
ತುದಿಯ ನೋಡಿದೆ.
ಆಗದು ಎಂದು ಕೈ ಚೆಲ್ಲಿ ಕುಳಿತರೂ
ಮೈ ಒಳಗಿನ ಬೆಂಕಿ ತಿವಿದು ತಿವಿದು ಎಬ್ಬಿಸಿತ್ತು!
ಮೊಗಮ್ಮಾಗಿ ನಿದ್ದೆ ಹೋದೆ.
ಆದರೆ ಕನಸಲಿ ಕಾಡಿ ಬಂತು ಬೆಟ್ಟ ಮತ್ತು ಬೆಟ್ಟದ ತುದಿ.

ಮತ್ತೊಮ್ಮೆ ತಪ್ಪಲಲಿ ನಿಂತು ನೋಡಿದೆ
ಅದೇ ಎತ್ತರ ಅಷ್ಟೆ ಜಡ ಆಗಲಿಲ್ಲ
ಹಿಂತಿರುಗಿ ಹೊರಟುಬಿಟ್ಟೆ.
ಬೆಟ್ಟ ಕನಸಲಿ ಮತ್ತೊಮ್ಮೆ ಕಾಡಿತು, ನಿರಾಳ ನಿದ್ದೆಗೆ ಅಡ್ಡಿಯೊಡ್ಡಿ

ಈಗ ಬೆಟ್ಟದ ತಪ್ಪಲಲಿ ನಿಂತು ನೋಡಲಿಲ್ಲ
ನೇರ ಹತ್ತುವ ಸಾಹಸಕ್ಕಿಳಿದೆ.
ಕೆಲ ಹೊತ್ತಿನ ನಂತರ ಸಪಾಟದ ಮೆಟ್ಟಿಲುಗಳಿದ್ದವು
ಕೆಲಸ ಸುಲಭವಾಯಿತು, ಮನಸು ಹಗುರವಾಯಿತು.
ಸರ ಸರನೆ ಹತ್ತಿ ಬಿಟ್ಟೆ ಬೆಟ್ಟ.
ಕೆಲವೇ ಕ್ಷಣಗಳಲಿ ತುದಿ ತಲುಪಿದ್ದೆ.

ಅಲ್ಲಿ!
ಆ ತುದಿಯಲ್ಲಿ ಸಣ್ಣಗೆ ನಡುಗುತಿರುವ ಭೂಮಿ.
ಹತ್ತಿರಕ್ಕೆ ಹೋಗುವ ಧೈರ್ಯ ಬರಲಿಲ್ಲ.
ಒಂದೆ ಒಂದು ಹೆಜ್ಜೆ ಮುಂದೆ ಇಟ್ಟು
ನೋಡಿದರೆ ಮೊದಲು ಬೂದಿ.
ಬೂದಿಯ ಕೆಳಗೆ ಧಗಧಗಿಸುವ ಲಾವ!!!
ಭುಗಿಲೇಳುವ ಸಮಯ.
ಬೆಟ್ಟವೇರಿದ ವೇಗಕ್ಕಿಂತ ಕೆಳಗಿಳಿಯುವ ಪ್ರಯತ್ನ ಮಾಡಿದೆ.
ಇನ್ನೂ ಬೆಟ್ಟದ ತುದಿ ಇಳಿದಿರಲಿಲ್ಲ.
ಅಹೊತ್ತಿಗಾಗಲೆ ಆಸ್ಪೋಟ!!!