Tuesday, June 7, 2011

ಹನುಮಪ್ಪ ನ ತೇರು! (ಪ್ರಬಂಧ)

ಭಾಗ - (೨)

ಮತ್ತೊಮ್ಮೆ ಎಲ್ಲರಿಗೂ ಹಳೆಯ ಹರೆಕೆಗಳು,ಪೂರ್ತಿ ಆಗದ ಬಯಕೆಗಳು,ಭಗ್ನ ಗೊಂಡ ಕನಸುಗಳು,ಎಲ್ಲವನ್ನೂ ಪಡೆದುಕೊಂಡದಕ್ಕೆ ಉಪಕಾರ ಸ್ಮರಣೆ,ಹೀಗೆ ಏನೇನೊ ನೆನಪಾದವು.ಜಾತ್ರೆ ಬಂತು ಬಂತು ಅನ್ನುತ್ತಲೇ ಆ ಎಂಟು ಗ್ರಾಮಗಳ ತಮ್ಮ ತಮ್ಮ ನೆಂಟರ ಮನೆಗೆ,ಪರಿಚಯಸ್ಥರ ಮನೆಗೆ ಜನ ಸಮುದಾಯ ಬಂದಿಳಿದರು.ಕಳೆದ ಬಾರಿ ಒಂಟಿಯಾಗಿ ಬಂದಿದ್ದವರು ಈ ಬಾರಿ ಜೊತೆಯಾಗಿ ಬಂದಿದ್ದರು.ಮದುವೆ ಯಾಗಿ ಮಕ್ಕಳಿಲ್ಲದೆ ಬಂದವರು ಈ ಬಾರಿ ಕಂಕುಳಲ್ಲಿ ಮಗುವನ್ನು ಹೊತ್ತು ತಂದಿದ್ದರು.ಮತ್ತೆ ಎಂಟು ಗ್ರಾಮ ಗಳ ತುಂಬಾ ಜನವೊ ಜನ.ತುಂಗ-ಭದ್ರ ನದಿಯ ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ ಆ ಕಡೆಗೆ ಹುಟ್ಟು ಹಾಕುವ ದೋಣಿಯಲ್ಲಿ ಹೊಗುವುದು,ಬರುವುದು ಸಮಾನ್ಯವಾಗಿತ್ತು.ಆಂಜನೇಯ ಸ್ವಾಮಿ ಉತ್ಸವದ ಕಾರ್ಯಕ್ರಮದ ಮೊದಲ ದಿನದ ಆಕರ್ಷಣೆ ತೆಪ್ಪೊತ್ಸವವಾಗಿತ್ತು.ಆಂಜನೇಯ ಸ್ವಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕಿರಿಸಿದ ತೆಪ್ಪದಲ್ಲಿ ಕುಳ್ಳಿರಿಸುತಿದ್ದರು.ಅಲ್ಲಿ ಸೇರಿದ ಭಕ್ತಾದಿಗಳು ಮುಗಿಲು ಮುಟ್ಟುವಂತೆ ಭಕ್ತಿ ಪರಾಕಷ್ಟೆ ಯಿಂದ "ಆಂಜನೇಯ ಸ್ವಾಮಿ ಗೋವಿಂದ,,,,,,,,,,,,,,,,,,,,,,,," ಕೂಗಿದರು.ಉತ್ಸವ ಮೂರ್ತಿ ಯೊಂದಿಗೆ ದೇವಸ್ಥಾನದ ಮುಖ್ಯ ಅರ್ಚಕರು ಮತ್ತು ತೆಪ್ಪ ನೆಡೆಸುವ ಅಷ್ಟೆ ತೆಪ್ಪದಲ್ಲಿ ಇರುತಿದ್ದದ್ದು.ತೆಪ್ಪವನ್ನು ನದಿಯಲ್ಲಿ ಸ್ವಲ್ಪ ದೂರ ತೇಲಿಸದ ಮೇಲೆ ದೇವಸ್ಥಾನದ ಮುಖ್ಯ ಅರ್ಚಕರು ಉತ್ಸವ ಮೂರ್ತಿಯಲ್ಲಿ ತಲೆಯ ಮೇಲೆ ಹೊತ್ತು ನಿಧಾನವಾಗಿ ತೆಪ್ಪದಿಂದ ಇಳಿದು ಯಾವುದೊ ಶ್ಲೋಕವನ್ನು ಪಠಿಸುತ್ತ ಬುಡಕ್ಕನೆ ಮೂರು ಬಾರಿ ಮುಳಿಗಿ ಮೇಲೆ ಎದ್ದ ಮೇಲೆಯೇ,ನದಿಯ ದಡದಲ್ಲಿದ್ದ ಜನ ಸಮೂಹ ಧಬಧಬನೆ ನದಿಗೆ ಧುಮುಕುತಿದ್ದರು.ಆ ಸಂದರ್ಭ ವಾಸ್ತವದಲ್ಲಿ ದೇವರು ಸ್ನಾನ ಮಾಡಿದ ನೀರು ಆ ನದಿಯಲ್ಲಿ ಮನುಷ್ಯರು ತಮ್ಮ ಬಯಕೆ ಈಡೆರಿಕೆಗೆ ಮನದಲ್ಲಿ ಬಯಕೆಗಳನ್ನು ಅಂದು ಕೊಂಡು ಸ್ನಾನ ಮಾಡಿದರೆ ಅವರ ಬಯಕೆಗಳು ಈಡೆರುವುದು ಅಂತ ಒಂದು ಪ್ರತೀತಿ.

ಸ್ನಾನದ ನಂತರ ಪ್ರತಿಯೊಬ್ಬರ ಮನದಲ್ಲೂ ಏನೊ ಒಂದಿಲ್ಲ ಒಂದು ಸಂಭ್ರಮ.ಕೆಲವರಿಗೆ ತಮ್ಮ ಬಯಕೆಗಳು ಈಡೆರುವ ಬಗ್ಗೆ ಒಂದು ತೆರೆನಾದ ಸೂಚನೆ ಸಿಕ್ಕಂತೆ ಮಾತಾಡುತಿದ್ದರು.ಇದೆಲ್ಲವೂ ಅವರವರ ಭಾವಕ್ಕೆ ಮತ್ತು ಭಕ್ತಿಗೆ ತಕ್ಕಂತೆ ಇರುತಿತ್ತು.ಮತ್ತೆ ಜನತೆಯ ಗುಜು ಗುಜು,ಗದ್ದಲ,ಮಾತು,ಹರ್‍ಅಟೆ....ಜಗಳ,ದೂರು,ಛಾಡಿ ನಡೆದಿರುತಿತ್ತು.ಯಾರೊ ಅಪರೂಪವಾಗಿ ಬಹಳ ದಿನಗಳ ನಂತರ ಸಿಕ್ಕ ಸ್ನೇಹಿತನನ್ನು ಕಂಡು ತುಂಬ ಆಶ್ಚರ್ಯ ಮತ್ತು ಸಂತೋಷದಿಂದ ಮಾತಾಡಿಸಿದರೆ,ಇನ್ಯಾರೊ ಗ್ರಾಮದಲ್ಲಿ ಹದಿನೈದು ವರ್ಷದ ಹಿಂದೆ ನಡೆದ ಕ್ಷುಲ್ಲಕ ವಿಷಯದ ಮರಾ ಮರಾ ನೆನೆದು ಮರುಗುತಿದ್ದರು.ಇನ್ಯಾರೋ ಅದೇ ವಿಷಯವನ್ನು ನೆನೆದು ನಖಶಿಖಾಂತ ಉರಿದು ಬೀಳುತಿದ್ದರು.ಹಾಗೂ ಹೀಗೂ ಅನ್ನುತ್ತಲೇ ಜಾತ್ರೆಯ ಮೊದಲ ದಿನ ಮುಗಿದು ಹೋಗಿರುತಿತ್ತು.

*********************************

ಮತ್ತೆ ಮರುದಿನ ರಥೋತ್ಸವದ ಸಡಗರ.


ಬೆಳಿಗ್ಗೆಯಿಂದಲೇ ಕೆಲವರಿಗೆ ಸಣ್ಣಗೆ ಶುರುವಾಗಿತ್ತು ಮತ್ತೆ ಯಾಂತ್ರಿಕ ಬದುಕಿನ ಯಾತನೆಗಳು.ಅರ್ಧ ಮನಸ್ಸು ದೇವಸ್ಥಾನದಲ್ಲಿ ಇನ್ನರ್ಧ ತಮ್ಮ ತಮ್ಮ ಆತಂಕಗಳಲ್ಲಿ.ರಥಕ್ಕೆ ಬಣ್ಣ ಬಣ್ಣದ ಬಾವುಟಗಳ ಜೊತೆಗೆ ತೆಂಗಿನ ಗೆರೆ ಮಾವಿನ ಸೊಪ್ಪು ಕಟ್ಟಲಾಗಿತ್ತು.ರಥವನ್ನು ಸಿಂಗರಿಸುವುದಕ್ಕೂ ಮೊದಲು ವರ್ಷಗಳಿಂದ ಮಡುಗಟ್ಟಿದ್ದ ಧೂಳನ್ನು ಕೊಡವಿ ಇಪ್ಪತ್ತು ಅಡಿ ಎತ್ತರದ ರಥಕ್ಕೆ ಮೇಲಿನಿಂದ ಹತ್ತು ಹನ್ನೆರೆಡು ಲೀಟರ್ ನಷ್ಟು ಕಡಲೆ ಎಣ್ಣೆ ಸುರಿದು ಮಜ್ಜನ ಮಾಡಿಸಿ,ಸ್ವಚ್ಚವಾಗಿಸಿ ಅರಿಶಿನ,ಹುರಿಮಂಜು ಮತ್ತು ಸುಣ್ಣ ಬಳಿದು ರಥೊತ್ಸವಕ್ಕೆ ಸಿದ್ಧಮಾಡಿದ್ದರು.ನಿಧಾನವಾಗಿ ಜನ ಸಂದಣಿ ರಥೊತ್ಸವ ನಡೆಯುವ ಸ್ಥಳಕ್ಕೆ ಜಮಾಯಿಸಲು ಶುರು ಮಾಡಿದ್ದರು.ಹೆಂಗಸರು ಬಣ್ಣ ಬಣ್ಣ ದ ರೇಶ್ಮೆ ಸೀರೆಗಳನ್ನು ಉಟ್ಟು ತಲೆತುಂಬಾ ಹೂವು ಮುಡಿದು ಸಿಧ್ಧರಾಗಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಗಂಡಸರು ಒಂದು ಪಂಚೆ ಮೇಲೆ ಒಂದು ಶಲ್ಯ ಹೊದ್ದು ಸೀದಾ ಸಾದಾ ಸಿದ್ಧರಾಗಿ ರಥೋತ್ಸವಕ್ಕೆ ಬಂದಿದ್ದರು.


ದೇವಸ್ಥಾನದಲ್ಲಿ ಮುಗಿಯಬೇಕಿದ್ದ ಸಂಪ್ರದಾಯಗಳು ಇನ್ನು ಮುಗಿದಿರಲಿಲ್ಲ.ಗಂಟೆ,ಜಾಗಟೆ,ನಗಾರಿ ಮತ್ತು ತಾಳ ಒಟ್ಟಿಗೆ ಬಾರಿಸುವ ಯಂತ್ರ ದ ಸದ್ದು ಮಾರು ದೂರ ಇದ್ದ ರಥದ ವರೆಗೂ ಕೇಳಿಸುತಿತ್ತು.ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಮಾಡಿದರು ಮುಖ್ಯ ಅರ್ಚಕರು.ಅದು ರಥೋತ್ಸವದ ಕಾರ್ಯಕ್ರಮಗಳಿ ಚಾಲನೆ ನೀಡುವ ಅಂಕಿತವಾಗಿತ್ತು.ಭಕ್ತಾಭಿಮಾನಿಗಳು ಆಂಜನೇಯ ಸ್ವಾಮಿಯನ್ನು ಪಲ್ಲಕ್ಕಿ ಯಲ್ಲಿ ಹೊತ್ತು ತರುವಾಗ ಮುಗಿಲು ಮುಟ್ಟುವಂತೆ "...ಭಕ್ತಾಭಿಮಾನಿ ಗೋವಿಂದ..ಗೋವಿಂದ...ಆಂಜನೇಯ ವರದ ಗೋವಿಂದ.....ಗೋವಿಂದ.....ಭಕ್ತವತ್ಸಲ ಗೋವಿಂದ...ಗೋವಿಂದ..." ಅಂತ ಕೊಂಡಾಡಿದ್ದರು.


ಪಲ್ಲಕ್ಕಿ ರಥದ ಹತ್ತಿರಕ್ಕೆ ಬರುವುದಕ್ಕೆ ಇನ್ನು ಸಮಯ ವಿತ್ತು.ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವ ವನ್ನು ತಮ್ಮ ವ್ಯಾಪಾರಿ ಬುದ್ಧಿ ಉಪಯೋಗಿಸಿ ಕರ್ಪೂರವನ್ನೊ,ಕಲ್ಲು ಸಕ್ಕರೆಯನ್ನೊ, ಬಾಳೆ ಹಣ್ಣನ್ನೊ,ಉತ್ತತ್ತಿಯನ್ನೊ - ಒಟ್ಟಾಗಿ ಏನಾದರೊಂದು ಮಾರುವುದಕ್ಕೆ ಸಿದ್ಧತೆ ಮಾಡಿಕೊಂಡರು.ಬಿದಿರಿನ ಬುಟ್ಟಿಗಳಲ್ಲಿ,ಇಲ್ಲವೇ ತಳ್ಳು ಗಾಡಿಗಳಲ್ಲಿ - ಒಂದಿಲ್ಲ ಒಂದು ಸಾಧನ ಉಪಯೋಗಿಸಿ ವ್ಯಾಪಾರಕ್ಕೆ ಮುಂದಾದರು.ದೇವರನ್ನು ಹೊತ್ತ ಪಲ್ಲಕ್ಕಿ ರಥದ ಹತ್ತಿರಕ್ಕೆ ಬಂದಂತೆ ಜನ ಸೇರುವುದು ಹೆಚ್ಚಾಯಿತು.ರಥದ ಎಡಕ್ಕೆ,ಬಲಕ್ಕೆ,ಮುಂದೆ,ಹಿಂದೆ - ರಥವನ್ನು ಜನರು ಸುತ್ತುವರಿದರು.ಕೆಲವರ ಕೈಯಲ್ಲಿ ತೆಂಗಿನ ಕಾಯಿ,ಇನ್ನು ಕೆಲವರ ಕೈಯಲ್ಲಿ ಸಣ್ಣ ಬಾಳೆ ಹಣ್ಣು,ಉತ್ತತ್ತಿ.ಪಲ್ಲಕ್ಕಿ ಹತ್ತಿರಕ್ಕೆ ಬಂದ ಮೇಲೆ ಸೇರಿದ ಭಕ್ತ ಸಮೂಹವೆಲ್ಲ "...ಆಂಜನೇಯ ವರದ ಗೋವಿಂದ.....ಗೋವಿಂದ....." ಅಂತ ಭಕ್ತಿಯಿಂದ ಕೂಗಿದ್ದರು.ಎಂಟು ಗ್ರಾಮದ ಮುಖ್ಯಸ್ಥರು ಮತ್ತು "ಆಂಜನೇಯ ಸ್ವಾಮಿ ಸೇವಾ ಸಮಿತಿ" ಸದಸ್ಯರೆಲ್ಲರೂ ರಥದ ಮುಂದೆ ಶ್ವೇತ ವಸ್ತ್ರಧಾರಿಗಳಾಗಿ ನಿಂತಿದ್ದರು.

ದೇವಸ್ಥಾನದ ಮುಖ್ಯ ಅರ್ಚಕರ ಅಣತಿಯಂತೆ ರಥಕ್ಕೆ ಒಂದೊಂದೆ ವಿಧಿ ವಿಧಾನಗಳನ್ನು ಒಬ್ಬಬ್ಬರಾಗಿ ಮಾಡಿಕೊಂಡು ಬಂದರು.ಎಲ್ಲಿಯೂ ಸ್ವಪ್ರತಿಷ್ಟೆ ಕಾಣಿಸುತ್ತಿರಲಿಲ್ಲ ಎಲ್ಲರಲ್ಲೂ ದೇವರು..ಅಂಜನೇಯ ಸ್ವಾಮಿ ..ಮತ್ತು ಅವನ ಅನುಗ್ರಹ ಮಾತ್ರವೇ ಕಾಣುತಿತ್ತು.ಮೆಲ್ಲಗೆ ಪಲ್ಲಕ್ಕಿಯಿಂದ ಉಳಿಸಿದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮುಖ್ಯ ಅರ್ಚಕರು ರಥಕ್ಕೆ ತಲೆಯ ಮೇಲೆ ಹೊತ್ತು ಕೊಂಡರು.ರಥಕ್ಕೆ ನಿಲ್ಲಿಸಲಾಗಿದ್ದ ಏಣಿಯನ್ನು ಒಂದು ಕೈಯಲಿ ಹಿಡಿದು ಮತ್ತೊಂದು ಕೈಯಲ್ಲಿ ತಲೆಯ ಮೇಲೆ ಇರುವ ಆಂಜನೇಯ ಸ್ವಾಮಿಯನ್ನು ಹಿಡಿದು ಏಣಿಯ ಒಂದೊಂದೆ ಮೆಟ್ಟಿಲನ್ನು ಏರಿದರು.ಪ್ರತಿ ಮೆಟ್ಟಿಲು ಏರಿದಾಗಲೊಮ್ಮೆ -"...ಆಂಜನೇಯ ವರದ ಗೋವಿಂದ....ಗೋವಿಂದ..." ಅಂತ ಜನ ಸಮೂಹ ಮಾರ್ಧನಿಸುತಿತ್ತು.ಅರ್ಚಕರು ಮೇಲೆ ತಲುಪಿ ನೆರೆದಿದ್ದ ಸಮೂಹಕ್ಕ ಕೇಳಿಸುವಂತ ಗಟಿಯಾಗಿ ಗಂಟೆ ಬಾರಿಸುತ್ತಾ ಆಂಜನೇಯ ಸ್ವಾಮಿಗೆ ಮಂಗಳಾರತಿ ಮಾಡಿ ಮಾಡಿದರು.ನಂತರ ರಥದ ಒಳಗೆ ಕಟ್ಟಲ್ಪಟ್ಟಿದ್ದ್ಕ ದಪ್ಪ ಆಕಾರ ದ ಹಗ್ಗಗಳು ಸಮಿತಿಯ ಸದಸ್ಯರಲ್ಲಿ ಒಬ್ಬರು ಎಳೆದು ಕೆಳಗೆ ತಂದು ರಥದ ಮುಂದೆ ನಿಂತಿದ್ದ ಗಂಡಸರ ಹತ್ತಿರಕ್ಕೆ ಬೀಸಿದರು.ಹಗ್ಗ ಕೈಗೆ ಬರುತ್ತಲೇ ವೀರಾವೇಷದಿಂದ ರಥವನ್ನು ಎಳೆಯಲು ಮುಂದಾದರು.ರಥ ನಾಲ್ಕು ಹೆಜೆ ಕದಲಿತೊ ಇಲ್ಲವೂ ಆಗಲೇ ಉರ್‍ಇಗೆ ವಾಪಸ್ಸಾಗುವ ದುಗುಡ ಜನತೆಯಲ್ಲಿ ಮಡುಗಟ್ಟಿತ್ತು.

No comments: