Friday, June 3, 2011

ಡೊಣ್ಣೆ ನಾಯಕ...!

ಭಾಗ - (೧)ಅಧ್ಯಾಯ - (೧).. .ರಥೋತ್ಸವ!
ಆಕಳು ಗಳ ಕೊರಳಲ್ಲಿ ಕಟ್ಟಿದ್ದ ಗೆಜ್ಜೆಗಳ ಸದ್ದು ಮೆಲ್ಲಗೆ ಕರುಗುತ್ತಲೇ ಶಾಂತಕುಮಾರ ಜಮೀನ್ದಾರ್ ತಲುಪಿತ್ತು.ಹೊಳೆದಂಡಿಯಲ್ಲಿ ಮತ್ತೆ ಸ್ವಲ್ಪ ದೂರ ಸಾಗಿ ನದಿಯ ಅಲಿಗಳನ್ನೆ ದಿಟ್ಟಿಸುತ್ತಾ ನಿಂತುಬಿಟ್ಟ.ಒಮ್ಮೆಲೆ ಗಾಳಿ ಬೀಸಿದ್ದರಿಂದ ಹಳ್ಳಿಕಡೆ ಯಿಂದ ಡೊಳ್ಳು,ಗೆಜ್ಜೆ ಜಾತ್ರೆ ಜನರ ಗದ್ದಲ,ಕೇಕೆ,ಗುಸು ಗುಸು ಮತ್ತೊಮ್ಮೆ ಶಾಂತಕುಮಾರನನ್ನು ತಲುಪಿದ್ದವು.ಒಳಗೊಳಗೆ ನಸು ನಕ್ಕು ಇನ್ನು ಎಷ್ಟು ದೂರ ಅಂತ ಹೋಗಲಿ? ಅಂತ ತನ್ನನ್ನೆ ಪ್ರೆಶ್ನಿಸಿದ್ದ.ಜಾತ್ರೆ ಯ ಗದ್ದಲ ಅವನನ್ನು ಕಸಿಕಸಿ ಮಾಡಿದ್ದವು.ವಾಸ್ತವವಾಗಿ ಶಾಂತಕುಮಾರ್ ಆ ಎಲ್ಲಾ ಗದ್ದಲ,ಗುಸು-ಗುಸು,ಜನರ ಕೇಕೆ ಗಳಿಂದ ದೂರ ಇರಲು ಬಯಸುತ್ತಿದ್ದ.
ಮೊಬೈಲ್ ಗೆ ಬಂದ ಮಗಳ ಕರೆಯನ್ನು ಕತ್ತರಿಸಿ ಮೊಬೈಲ್ ಗುಂಡಿ ಒತ್ತಿ ಆರಿಸ ಬೇಕೆಂದು ಇದ್ದಾಗ "ಅಪ್ಪ...ಎಲ್ಲಿದ್ದಿಯಾ ..ಬಾ ರಥೋತ್ಸವಕ್ಕೆ..." ಅಂತ ಮಗಳು ಸುಧಾ ಕಳಿಸಿದ್ದ ಸಂದೇಶವನ್ನು ಹಿಂದು ಮುಂದು ಯೋಚಿಸಿದೆ ಅಳಿಸಿ ಮೊಬೈಲ್ ನ್ನು ಆರಿಸಿ ಅಂಗಿಯ ಕಿಸೆಯಲ್ಲಿ ಇರಿಸಿದ್ದ.ಹೊಳೆದಂಡಿಯಲ್ಲಿ ಕೆಸರು ಇದ್ದರಿಂದ ತಾನು ಕಟ್ಟಿದ್ದ ಪಂಚೆಯನ್ನು ಎತ್ತಿ ಕೈಲಿ ಹಿಡಿದು ತಡವರಿಸುತ್ತಲೇ ಮುಂದೆ ಹೋದ.ಆದರೂ ಆಗೊಮ್ಮೆ ಈಗೊಮ್ಮೆ ಮತ್ತೆ ಜಾತ್ರೆಯ ಗದ್ದಲ ಗಾಳಿ ಬೀಸಿ ಬಂದಾಗಲೊಮ್ಮೆ ಶಾಂತಕುಮಾರ ಕಿವಿ ತಲುಪುತಿತ್ತು.
ದೂರದಲ್ಲಿ ಕಾಣಿಸುತ್ತಿದ್ದ ಆ ನೀಲಗಿರಿ ತೋಪಿನೊಳಗೆ ಹೊಕ್ಕುಬಿಡಲೇ ಅಂದು ಕೊಂಡು.ನೀಲಿಗಿರಿ ತೋಪಿನೊಳಗೆ ಹೊಕ್ಕಲು ಮುಂದಾದ.ಶಾಂತಕುಮಾರ ನ ಮನಸ್ಸು ಮಾತಾಡ ಹತ್ತಿತು.
"ಎಲ್ಲಿಗೆ ಹೋಗ್ಬೇಕು?...ಎಷ್ಟು ಅಂತ ದೂರ ಹೋಗ್ಬೇಕು...ಯಾರಿಂದ ತಪ್ಪಿಸ್ಕೊ ಬೇಕು?"
ಶಾಂತಕುಮಾರ ಸುಮ್ಮನೆ ನಕ್ಕು ಸುಮ್ಮನಾಗಿದ್ದ ,ಉತ್ತರವಿಲ್ಲದ್ದಕ್ಕೆ.
________________________________________________________________________________
ಹಳ್ಳಿಯಲ್ಲಿ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುತಿತ್ತು.ಕ್ಷೇತ್ರವಿಧಿಯಂತೆ ಊರ ಶಾನಭೋಗರು,ಗೌಡರು ಮತ್ತೆ ಜಾತ್ರೆಯ ರಥದ ಚಕ್ರಗಳಿಗೆ ಪೂಜೆ ಮಾಡಬೇಕು.ಊರ ಶ್ಯಾನಭೋಗರು ಈಗಿಲ್ಲ ಅವರ ಮಕ್ಕಳಲ್ಲಿ ಒಬ್ಬರಾದ ಭೀಮಸೇನ ಚಕ್ರಗಳಿಗೆ ಪೂಜೆ ಮಾಡಿ ಹಿಂದೆ ಸರಿದ.ಶ್ಯನಭೋಗರ ವಂಶಸ್ಥ ಎನ್ನುವ ಯಾವುದೆ ಅಹಮಿಕೆ ಭೀಮಸೇನ ನಿಗೆ ಇರಲಿಲ್ಲ.ಎಲ್ಲಾ ಆಂಜನೇಯನ ಸೇವೆ ಅನ್ನುತ್ತಲೇ ಭಕ್ತಿಯಿಂದ ಮಾಡಬೇಕಾದ ಕಾರ್ಯಕ್ರಮಗಳನ್ನೆಲ್ಲಾ ಶ್ರಧೆಯಿಂದ ಮಾಡಿದ್ದ.ರಥಕ್ಕೆ ಸಾಂಷ್ಟಾಂಗ ನಮಸ್ಕಾರ ಮಾಡಿ ದೂರ ಸರಿದು ನಿಂತಿದ್ದ.
ಮಂಜುನಾಥ ಊರ ಗೌಡ್ರ ಮೊಮ್ಮಗ.ಹಳ್ಳಿಯಲ್ಲೆ ಸಣ್ಣ ಪುಟ್ಟ ರಾಜಕೀಯ ಮಾಡುತ್ತಾ ಉರ್‍ಎ ತನ್ನದೆನ್ನುತ್ತಾ ತಿರುಗಾಕೊಂಡಿದ್ದ.ಮಂಜುನಾಥನಿಗೆ ದೇವರ ಮೇಲಿನ ಭಕ್ತಿ ಮತ್ತು ಶ್ರದ್ಧೆ ಗಿಂತ ತನ್ನ ದೊಡ್ಡಸ್ತಿಕೆ ತೋರಿಸಿ ಕೊಳ್ಳುವುದು ಬೇಕಾಗಿತ್ತು.ಪ್ರತಿ ಯೊಂದು ಸಂಪ್ರದಾಯ ನಡೆಸಿಕೊಟ್ಟಾಗಲು ನಾಟಕೀಯವಾಗಿ ಕೈ ಮುಗಿಯುತ್ತಾ..ಸುತ್ತಲೂ ಸೇರಿದ್ದ ಜನತೆ ಕಡೆ ಕೈ ಬೀಸುತ್ತಾ...ಆ ಜಾತ್ರೆಯನ್ನು ತನಗೆ ಪುಗ್ಸಟ್ಟೆ ಪ್ರಚಾರಕ್ಕಾಗಿ ಒಂದು ವೇದಿಕೆ ಯಾಗಿ ಸಿದ್ಧತೆ ಮಾಡಿದ್ದ....

No comments: