Thursday, April 2, 2009

ಲಂಕೇಶ ರ ’ಹುಳಿಮಾವಿನಮರ’ ಮತ್ತು ನಾನು


"ಉಳಿದಿರುವ ಕಾಲ ಎಷ್ಟೋ ಗೊತ್ತಿಲ್ಲ.ಒಂದು ಕಣ್ಣು ಮುಚ್ಚಿಹೋಗಿರುವಾಗ,ಹೊರಗೆ ತುಂತುರು ಹನಿ ಬಿಳುತ್ತಿರುವ ಈ ಆಗಷ್ಟ್ ತಿಂಗಳ ಕೊನೆಯಲ್ಲಿ ಯಾವ ಪಂಕ್ತಿಯೊಂದಿಗೆ ಇದನ್ನು ಮುಗಿಸಲಿ ಎಂದು ನೋಡುತ್ತಿದ್ದೇನೆ.ಆ ಪರಿಣಾಮ ಕಾರಿ ಮಾತುಗಳೂ ಅನಗತ್ಯ.ಇಷ್ಟಕ್ಕೆ ಸುಮ್ಮನಾಗುತ್ತಿದ್ದೇನೆ."--ಇದು ಲಂಕೇಶ್.
ನಾನು ಕನ್ನಡ ಸಾಹಿತ್ಯದ ಓದು ಪ್ರಾರಂಭ ಮಾಡಿದ್ದು ಕುವೆಂಪು ಅವರ ಕವನಗಳಿಂದ.ನಂತರ ಹೊರಳಿದ್ದು ಲಂಕೇಶ್ ಮತ್ತು ಕರ್ನಾಡ ರ ಬರಹಗಳಿಗೆ.ಇವರಿಬ್ಬರನ್ನು ನನಗೆ ಪರಿಚಯಿಸಿದ್ದು ನನ್ನ ಅಪ್ಪ.’ಅಕ್ಕ’ ಲಂಕೆಶ್ ರ ಕಾದಂಬರಿ ಓದಿ ಮುಗಿಸಿದಾಗ ನಾನು ಇಂಜಿನಿಯರಿಂಗ್ ನ ಎರಡನೇ ವರ್ಷ ದಲ್ಲಿದ್ದೆ.ಅದಾದ ನಂತರ ’ನನ್ನ ತಂಗಿಗೆ ಒಂದು ಗಂಡು ಕೊಡಿ’,’ತೆರೆಗಳು’ - ಹೀಗೆ ಒಂದಾದ ಮೇಲೆ ಒಂದು ಲಂಕೇಶ್ ರ ನಾಟಕ, ಕಾದಂಬರಿ ಯನ್ನು ಓದಿ ಮುಗಿಸಿದೆ.ಇದರ ಮಧ್ಯದಲ್ಲೇ ಲಂಕೇಶ್ ರ ಆತ್ಮಕಥನ ’ಹುಳಿಮಾವಿನ ಮರ’ ಬಿಡುಗಡೆ ಆಗಿತ್ತು.ಆದರೆ ನನಗೆ ಇದನ್ನು ಮಾತ್ರ ಓದಲು ಆಗಿರಲಿಲ್ಲ.ಮೊನ್ನೆ ಆಮೇರಿಕಾ ಕ್ಕೆ ಹೋಗುವಾಗ ’ಹುಳಿಮಾವಿನ ಮರ’ ಮತ್ತು ಭೈರಪ್ಪ ನವರ ’ಗ್ರಹಣ’ ಎರಡನ್ನೂ ತೆಗೆದುಕೊಂಡು ಹೋಗಿದ್ದೆ.ವಾಪಸಗುವ ಹೊತ್ತಿಗೆ ಇವೆರಡನ್ನು ಮುಗಿಸಿದ್ದೆ.ಆದರೇ ಲಂಕೇಶ್ ರ ’ಹುಳಿಮಾವಿನ ಮರ’ ನನ್ನ ಕಾಡುತ್ತಲೇ ಇತ್ತು.ನನಗೆ ಅವರ ಬರಹ ಗಳು ಕಾಡುವ ತೀವ್ರತೆ ಯಲ್ಲೆ ಅವರ ಆತ್ಮಕಥನ ವೂ ಕಾಡಿತ್ತು.
ಈ ಆತ್ಮಕಥನ ಓದುವ ವರೆಗೂ ಅದರ ಹೆಸರಿನ ಬಗ್ಗೆ ಒಂದು ಕುತೂಹಲ ವಿತ್ತು.ಆದರೇ ಲಂಕೆಶ್ ಮುನ್ನುಡಿಯಲ್ಲೇ ಅದನ್ನು ಸ್ಪಷ್ಟಪಡಿಸುತ್ತಾರೆ.ದೈತ್ಯವಾಗಿ ಬೆಳೆಯುತ್ತಾ ತನ್ನ ಹೂವು,ಕಾಯಿ,ಹಣ್ಣು ಗಳಿಂದ ಲೇ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಾ,ನೂರಾರು ವರ್ಷ ಬಾಳಿ ಕೊನೆಗೆ ಒಮ್ಮೆ ಮಣ್ಣಾಗಿ ಹೊದರೂ ಅದರ ಅಳಿದುಳಿದ ಬೊಡ್ಡೆ,ಕತ್ತರಿಸಿದ ಕೊಂಬೆ ಇನ್ನೋ ಲಂಕೇಶ್ ರಿಗೆ ಕುತೂಹಲ ವಾಗಿದ್ದವೂ.ಹೀಗೆ ಹೇಳುತ್ತಲೇ ತಮ್ಮ ಆತ್ಮ ಕಥನವನ್ನು ಪ್ರಾರಂಭಿಸುತ್ತಾರೆ,ಲಂಕೇಶ್. ನಿಜವಾಗಿಯೂ ಹೇಳುತ್ತೇನೆ ಎಲ್ಲಿ ಪುಸ್ತಕ ವನ್ನು ಗಟ್ಟಿಯಾಗಿ ಅದುಮಿ ಹಿಡಿದರೆ ಅದನ್ನು ಓದುವ ಸ್ವಾರಸ್ಯ ಕರಗಿ ಹೋಗುತ್ತೋ ಎನ್ನುವಂತೆ ಮೆತ್ತಗೆ ಹಿಡಿದು ಮೆತ್ತಗೆ ಪುಟಗಳನ್ನು ತಿರುವುತ್ತಾ ಓದಿದ್ದೇನೆ.ಮಾವಿನ ಮರದಂತೆ ವಾಟೆ,ಸಸಿ,ಗಿಡ ಮತ್ತು ಮರ ಎನ್ನುವಂತೆ ವಿವಿಧ ರೀತಿಯಲ್ಲಿ ತಮ್ಮ ಜೀವನ ದ ಘಟನೆ ಗಳನ್ನು ದಾಖಲಿಸುತ್ತಾ ಹೋಗುತ್ತಾರೆ.ಬದುಕು ಕೊನಗವಳ್ಳಿ ಯಿಂದ ಸಾಗಿ,ಶಿವಮೊಗ್ಗೆಗೆ ಬಂದು,ಅಲ್ಲಿಂದ ಮೈಸುರ್ ಗೆ ಹೋಗಿ ಅಲ್ಲಿಂದ ಮತ್ತೆ ಶಿವಮೊಗ್ಗೆ ಗೆ ಬಂದು ಮತ್ತೆ ಅಲ್ಲಿಂದ ಬೆಂಗಳೂರಿಗೆ ಬಂದು ನಿಲ್ಲುತ್ತದೆ.ಲಂಕೇಶ್ ರ ಆತ್ಮಕಥ ನ ಓದುವಾಗಿ ಒಂದು ಕಾಲ ದ ರಾಜಕೀಯ ಹೋರಾಟ ಗಳೇ ಇಲ್ಲಿ ಬಂದು ಹೋಗುತ್ತವೆ.ಗೋಪಾಲ ಗೌಡರು,ಬಸಲಿಂಗಪ್ಪ ನವರು,ಹೆಗಡೆ,ನಂಜುಡ ಸ್ವಾಮಿ..ಹೀಗೆ ಎಲ್ಲರ ಸಂಪರ್ಕ ಒಂದಲ್ಲಾ ಒಂದು ರೀತಿಯಲ್ಲಿ ಲಂಕೇಶ್ ರಿಗೆ ಬಂದು ಹೋಗುತ್ತವೆ.ಅಷ್ಟೇ ಅಲ್ಲದೆ ಒಂದು ಕಾಲದ ಸಾಂಸ್ಕೃತಿಕ ಮತ್ತು ಕನ್ನಡ ಭಾಷೆಯ ನಾಡಿಗಳಲ್ಲೂ ಲಂಕೇಶ್ ರನ್ನು ಕಾಣುತ್ತೇವೆ.ಅವರ ಸಿನಿಮಾ ಮಾಡುವ ಗೀಳು,ಭಾಷೆ ಯ ಬಗೆಗೆ ಅವರಿಗಿದ್ದ ಉಗ್ರ ಅಭಿಮಾನ ,ನಾಟಕ,ಹೀಗೆ ಎಲ್ಲಾ ತೆರೆನಾದ ಆ ಸಂದರ್ಬ ದ ನಾಡಿಮಿಡಿತವೆನ್ನುವಂತೆ ಲಂಕೇಶ್ ಆಗಿ ಬಿಡುತ್ತಾರೆ.ಎಲ್ಲಕಿಂತ ಮಿಗಿಲಾಗಿ ನನ್ನನ್ನ ಕಾಡಿದ್ದು ಅಂದರೆ ಹೀಗೆ ಬದುಕ ಬೇಕು ಅನ್ನದೆ ಧಗ ಧಗ ನೇ ಉರಿಯುವಂತೆ ಬದುಕಿ ಇರುವ ಸಮಯದಲ್ಲೆ ತೀವ್ರವಾಗಿ ಸಾಧಿಸಿ ಹೋದ ಲಂಕೇಶ್.ಅವರ ಆತ್ಮಕಥನ ವನ್ನು ಓದುತ್ತಲೇ ಇದನ್ನು ಇನ್ನೆಷ್ಟು ಪರಿಣಾಮಕಾರಿಯಾಗಿ ಮುಗಿಸಬಹುದು ಎನ್ನುವ ಕುತೂಹಲ ನನಗಿತ್ತು.ಸುಮ್ಮನೆ ನೋಡುವದರಲ್ಲಿ ಮೇಲೆ ಹೇಳಿದ ಅವರೇ ಹೇಳಿದ ಮಾತುಗಳು ಪರಿಣಾಮಕಾರಿಯಾಗಿ ಕಾಣದಿದ್ದರೂ - "ಇಷ್ಟೆಲ್ಲಾ ಹೇಳಿದಿನಿ ನನ್ನ ಬದುಕೇ ನಿಮಗೆ ಒಂದು ಎಚ್ಚರಿಕೆ ಅದೇ ಒಂದು ಗೈಡ್ ಎನ್ನುವಂತೆ ಮುಗಿಸುತ್ತಾರೆ ಲಂಕೇಶ್.ಇಷ್ಟಕ್ಕಿಂತ ಪರಿಣಾಮಕಾರಿ ಇನ್ಯವುದೇ ವಾಕ್ಯ ಕೊಡಲು ಸಾಧ್ಯವಿಲ್ಲ!

Thursday, January 1, 2009

ರೈಲು ಚಲಿಸಿದ ಹಾಗೆ ಅನ್ನಿಸಿತ್ತು!(ಸಣ್ಣಕಥೆ)

""ಮಂಜುನಾಥ ಆ ಚಿಲ್ದಾಗ ತಿನ್ನಾಕಿಟ್ಟೀನಿ ಅದನ್ನ ಎಂಟತ್ತ್ ದಿನ ಮಾಡ್ಕ್ಯಾ.ಊರು ಮುಟ್ಟಿದ್ಮ್ಯಾಕೆ ಪೋನ್ ಮಾಡ.ಕಂಪೂಟರ್ ಚೆಂದ ಕಲಿಯಾ..."ತಮ್ಮ ಮಗನ್ನ ರೈಲಿಗೆ ಹತ್ತಿಸಿದರು.
"ಹೂನ ಅವ್ವ ನೀ ಕಾಳಜಿ ಮಾಡ್ಬೇಡ ನೀ ಆರಾಮ ಇರ" ಅನ್ನ್ನುತ್ತ ಮಂಜುನಾಥ ಹಿಂದಿನ ನಿಲ್ದಾಣದಿಂದಲೇ ಹತ್ತಿದ್ದ ತನ್ನ ಇತರ ಸ್ನೇಹಿತರ ಗುಂಪಿನಲ್ಲಿ ಒಂದಾಗಿ ಹೋದ.'ಕೂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ'ಎನ್ನುತ್ತಾ ರೈಲು ಚಲಿಸಲು ಪ್ರಾರಂಭಿಸಿತು.ಆ ತಾಯಿ ಮಗನಿಗೆ ಕೈ ಬೀಸುತ್ತಲೇ ನಿಂತಿದ್ದಳು. ಮಂಜುನಾಥ ತನ್ನ ಸ್ನೇಹಿತರ ಜೊತೆ ಹರಟುತ್ತಾ,ಗೇಲಿ ಮಾಡುತ್ತಾ, ಪೋಲಿ ಮಾತಾಡುತ್ತಾ ಬೋಗಿಯ ತುಂಬೆಲ್ಲಾ ಗದ್ದಲ ವೆಬ್ಬಿಸಿದ್ದ.ರೈಲು 'ಕುಂಟಗದ್ದೆ' ಬಿಟ್ಟಿತ್ತು.
ಫಲ್ಗುಣ ಗೆ ತನ್ನ ಕಾಲೇಜು ದಿನ ಗಳು ನೆನಪಾಗಿತ್ತು.ಮನಸ್ಸು ಅವನ ಕಾಲೇಜು ದಿನಗಳಿಗೆ ಮರಳಿತ್ತು."ಹೀಗೆ ಇದ್ದೆನಲ್ಲಾ ನಾನು ನನ್ನ ಕಾಲೇಜು ದಿನಗಳಲ್ಲಿ.ಮಣಿಪಾಲದಲ್ಲಿ ನಾನು ಇಂಜಿನೀಯರಿಂಗ್ ಸೇರುವಾಗ ಅಪ್ಪನೂ ನನ್ನನ್ನ ಹೀಗೆ ತಾನೇ ಬಿಟ್ಟು ಹೋಗಿದ್ದು.ಅಪ್ಪ ನನಗೆ ರೂಮ್ ಮಾಡಿ ಒಂದಿಷ್ಟು ಸ್ನೇಹಿತರ ಪರಿಚಯ ಮಾಡಿಸಿಕೊಟ್ಟು,ಕೈಗೆ ಒಂದಿಷ್ಟು ದುಡ್ಡು ಕೊಟ್ಟು ಇನ್ನೇನು ಊರಿಗೆ ಹೋಗಬೇಕು ಅನ್ನುವಾಗ ,ಅಪ್ಪನ್ನ ಬಸ್ ನಿಲ್ದಾಣದಲ್ಲೆ ಬಿಗಿದಪ್ಪಿ ಅಳುತ್ತ ಬಿಟ್ಟು ಹೋಗ ಬೇಡ ಅಂತ ಅತ್ತಿದ್ದು,ಅಮೇಲೆ ಒಂದೆರೆಡು ದಿನ ನನ್ನ ಜೊತೆ ಇದ್ದು ಮತ್ತೆ ಊರಿಗೆ ಹೊದರಲ್ಲವೇ...?ಈ ಎಲ್ಲವೂ ಅವನ ಮನಸಿನಲ್ಲಿ ಚಕ್...ಚಕ್..ಚಕ್ ಅನ್ನುತ್ತಾ ತಿರುವಿ ಹೋಯಿತು. ಎರೆಡು ವರ್ಷ ದೊರವಿದ್ದದ್ದರಿಂದ ಅಪ್ಪ ಅಮ್ಮ ನ್ನ ನೋಡುವ ಆಸೆ, ತನ್ನ ಗದ್ದೆಯ ತುಂಬೆಲ್ಲಾ ಇಂಚಿಂಚು ಬಿಡದಂತೆ ಅಡ್ಡಾಡ ಬೇಕು ಎನ್ನುವ ಅತೀವ ಬಯಕೆ ಫಲ್ಗುಣ ನ ಮನಸಲ್ಲಿ ಇತ್ತು.
********************************************
'ಹೊಸಹಳ್ಳಿ'ಯಲ್ಲಿ ರೈಲು ಮತ್ತೆ ನಿಂತಿತು.ಯಾವುದೋ ಎಕ್ಸಪ್ರೆಸ್ ರೈಲಿಗೆ ದಾರಿ ಬಿಡಬೇಕಾಗಿ ಬಂದಿತ್ತು.ಇದು ಪ್ಯಾಸೆಂಜರ್ ಗಾಡಿ ಕುಂಟುತ್ತಾ ಸಾಗಬೇಕು ಅಲ್ಲದೆ ಎಕ್ಸಪ್ರೆಸ್ ರೈಲುಗಳಿಗೆ ದಾರಿಯೂ ಬಿಡಬೇಕು.'ಹೊಸ ಹಳ್ಳಿ' ರೈಲು ನಿಲ್ದಾಣದಲ್ಲಿ funkey hair style ನಲ್ಲಿ ಒಬ್ಬ ಭುಜಕ್ಕೆ ಕ್ಯಾಮಾರ ನೇತು ಹಾಕಿಕೊಂಡು,ಕೈಯಲ್ಲಿ ಒಂದು ಫೈಲು ಹಿಡಿದು ಕೊಂಡು ಹತ್ತಿದ.ಅಲ್ಲೆ ಫಲ್ಗುಣ ನ ಎದುರಿಗೆ ಕಿಟಕಿ ಯ ಪಕ್ಕ ದಲ್ಲಿದ್ದ ಸ್ಥಳದಲ್ಲಿ ಆಸೀನನಾದ.ಫಲ್ಗುಣಗೆ ಅವನ ಅವತಾರ ನೋಡಿ ವಾಕರಿಕೆ ಬಂತು.ನೋಡಲು ಆಗದಿರುವಷ್ಟು ಅಸಹ್ಯವಾಯಿತು.ಆ ಚಿಂದಿಯಾದ ಜೀನ್ಸ್, ಎಡ ಕೈ ಮೇಲೆ ಮೊಣಕೈಯವರೆಗೂ ಡ್ರ್ಯಾಗನ್ TATTO(ಹಚ್ಚೆ),ಕಿವಿಯಲ್ಲಿ ದೊಡ್ಡದಾದ ಬಳೆ-ಇವೆಲ್ಲಾವನ್ನೂ ನೋಡಿ "ಛೇ, ಏನಿದು ಅವತಾರ" ಅಂತ ಮನಸಲ್ಲೇ ಅಂದು ಕೊಂಡು ಕಿಟಕಿ ಆಚೆ ಕಾಣುತ್ತಲ್ಲಿದ್ದ ಹಚ್ಚ ಹಸಿರನ್ನು ಕಣ್ತುಂಬ ನೋಡ ಹತ್ತಿದ.'ಸುಂಯ್................................' ಎಂದು ಬಿರುಗಾಳಿ ವೇಗದಲ್ಲಿ ಬಂದ ಎಕ್ಸಪ್ರೆಸ್ ರೈಲಿ ಕಿಟಕಿಯ ಪಕ್ಕದಲ್ಲಿ ನಿಂತಿತು."ಛೇ ,ಏನಿದು ಕಣ್ತುಂಬ ಹಸಿರು ನೋಡಕ್ಕೂ ಕಲ್ಲಾ....?" ಆಂತ ಮನಸಲ್ಲೇ ಅಂದು ಕೊಂಡ."Did you say something?" ಎಂದು ಫ಼ಂಕಿ ಮನುಷ್ಯ ಫಲ್ಗುಣ ನ್ನ ಕೇಳಿದ."nothing"! ಫಲ್ಗುಣ ಅಸಡ್ಡೆ ಯಿಂದ ಉತ್ತರಿಸಿದ."would you mind if I smoke here"? ಅನ್ನುತ್ತ ಸಿಗರೇಟ್ ನ್ನು ಬಾಯಿಗೆ ಇಳಿಸಿದ."never" ಫಲ್ಗುಣ ಉತ್ತರಿಸಿದ್ದ.ಕಣ್ಣುಗಳು ಅನೀರೀಕ್ಷೀತವಾಗಿ ಅವನ ಫೈಲ್ ಮೇಲೆ ಬಿತ್ತು.'PRESS' ಅಂತ ಅದರ ಮೇಲೆ ಬರೆದಿತ್ತು."ಖಂಡಿತಾ ನನಗೆ ಒಂದಿಷ್ಟು ಸಲಹೆಗಳನ್ನು ಕೊಡಬಹುದು.ಪ್ರಪಂಚದ ಎಲ್ಲಾ ವಿದ್ಯಾಮಾನಗಳನ್ನು ತಿಳಿದಿರುತ್ತಾರೆ.ಅದರಲ್ಲಿಯೂ ಈಗ ಧಗ ಧಗಿಸುತ್ತಿರುವ ಸುದ್ದಿಗಳೆಂದರೇ ಇವರಿಗೆ ಎಲ್ಲಿಲ್ಲದ ಆಸಕ್ತಿ."ಅಂದುಕೊಳ್ಳಿತ್ತಿರುವಾಗಲೇ,
"by the way I am ನಾಗೆಂದ್ರ ಹೊಸಹಳ್ಳಿ".
"ಎಲ್ಲೋ ಹೆಸರು ಕೇಳಿದ ಹಾಗೆ ಇದೆಯಲ್ಲ"?
"ಶ್ರೀಗಂಧ ಟೀವಿ ಚಾನೆಲ್ ನಲ್ಲಿ ಬರುವ 'ಮದ್ಯಾಹ್ನ ದ ಮಾತು' ಕಾರ್ಯಕ್ರಮಕ್ಕೆ ನಾನೇ ನಿರೂಪಕ ಮತ್ತು 'ಸಂಜೆಗತ್ತಲು' ಕಾರ್ಯಕ್ರಮದ ನಿರ್ದೇಶಕ.'ಸಂಜೆಗತ್ತಲು, ನ್ಯೂಸ್ ಪೇಪರ್ ಗಳಲ್ಲಿ ಬರುವ page-3 ತರಹದ ಕಾರ್ಯಕ್ರಮ.ದೊಡ್ಡ ವರ ಸಣ್ಣತನಗಳು,ಮೂರನ್ನೂ ಬಿಟ್ಟವರ ವ್ಯಕ್ತಿತ್ವದ ಅನಾವರಣ.....ಹೀಗೆ"ಎಂದು ಹೇಳಿ ತನ್ನ ಕಾರ್ಯ ಕ್ರಮದ ವಿವರ ವೃತ್ತಿಯ ವಿವರ ಗಳೆನ್ನೆಲಾ ತಿಳಿಸಿದ. ಸಲಹೆಗಳನ್ನು ಕೇಳಬೇಕೆಂದು ಕೊಂಡವ ಒಳಗೆ ಸುಮ್ಮನಾದ.ತಾನು ಕೇಳಿದ ಸಲಹೆಯನ್ನೇ ದೊಡ್ಡ ದಾಗಿ ಮಾಡಿ ಮತ್ತೆ ತನ್ನ ನ್ನೇ ಸುದ್ದಿ ಯಾಗಿ ಎಲ್ಲಿ ಬಿತ್ತರಿಸಿ ಬಿಡುತ್ತಾನೋ ಅನ್ನೋ ಆತಂಕ ಬಂತು.ಮತ್ತೆ ಅವನು ಸುದ್ದಿಗಾಗಿ ತಹ ತಹ ಸುತ್ತಿರುವವ.ಅವನಿಗೆ ಸುದ್ದಿ ಬೇಕು ಅಷ್ಟೆ.ಇಂತಹದೇ ಸುದ್ದಿಯಿಂದಿಲ್ಲ.ಏನಾದಾರೂ ಆಗಿರಬಹುದು.ಯಾರಾದರೂ ಆಗಿರಬಹುದು." ಅದಕ್ಕೆ ಏನನ್ನೂ ಕೇಳದೆ ಸುಮ್ಮನಾದ.
***************************************
ರೈಲು ಚಲಿಸಿತು!ಪಕ್ಕದಲ್ಲಿದ್ದ ರೈಲು ,ಅದು ಎಕ್ಸಪ್ರೆಸ್ ರೈಲು.ಪ್ಯಾಸೆಂಜರ್ ರೈಲು ಚಲಿಸಿದ ಹಾಗೆ ಅನ್ನಿಸಿತ್ತು.
***************************
ಫಲ್ಗುಣ ,ಆಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಡಿಯಾಗೋ ಪಟ್ಟಣದಲ್ಲಿ ಸಾಫ್ಟವೇರ್ ವೃತ್ತಿ ನಿರತ.ಈಗಲೂ ಕೆಲಸದಲ್ಲಿ ಇದ್ದಾನೆ.ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಬದಲ್ಲಿ ತನ್ನ ಎಷ್ಟೋ ಸ್ನೇಹಿತರು ಆಮೇರಿಕಾದಾದ್ಯಂತ ಕೆಲಸ ಕಳೆದುಕೊಂಡಿದ್ದರು.ಇನೋ ಕೆಲವರು ಆತಂತ್ರ ದ ಸ್ಥಿತಿಯಲ್ಲಿ ಇದ್ದರು.ಕೆಲವೇ ಕೆಲವರು ಭದ್ರವಾಗಿದ್ದರು.ಅದರಲ್ಲಿ ಫಲ್ಗೂಣನೂ ಒಬ್ಬ.ತನ್ನ ಹಿರಿಯ ಅಧಿಕಾರಗಳು ಮತ್ತು ತನ್ನ ಸಹೋದ್ಯೂಗಿಗಳು ಅವನಿಗೆ ಸಾಕಷ್ಟು ಸಾರಿ "ನಿನ್ನ ಕೆಲಸದ ಬಗ್ಗೆ ಆತಂಕ ಬೇಡ" ಅಂತ ಮನವರಿಕೆ ಮಾಡಿದ್ದರು.ಆದರೆ ಅವನಿಗೆ ಆತಂಕ ನೆರಳಲ್ಲಿ ಬದುಕು ಸವೆಸುವುದು ಇಷ್ಟವಿರಲಿಲ್ಲ.ಇದೆಯಲ್ಲಾ ಗೊಂದಲಗಳಿಂದ ಹೊರಬರಲು ಬಹು ದಿನಗಳ ರಜೆ ಮೇರೆಗೆ ತನ್ನ ಹುಟ್ಟೂರಾದ 'ಹೊಸಗದ್ದೆ'ಗೆ ಬಂದಿದ್ದ.
****************************
ವಿಶ್ವ ಆರ್ಥಿಕ ಸಂಕಷ್ಟ ದಿನೇ ದಿನೇ ಏರುತ್ತಲಿತ್ತು.ಫಲ್ಗುಣ ನ ಕಂಪನಿ ಸಧೃಡ ವಾಗಿಯೇಇತ್ತು.
****************************************
ರೈಲು 'ಕೆಸರು ಗದ್ದೆ' ತಲುಪಿತ್ತು.
*******************************************

Wednesday, November 5, 2008

ನಗಬೇಡ!

ಆ ನೋಟ ಬೇಡ ಗೆಳತಿ,
ಈಗಲೇ ಅರ್ದ ಸತ್ತು ಹೋಗಿರುವೆ.
ಇನ್ನು ಹೆಣವಾಗಿಸದಿರು!

ನೋಟದ ಹಿಂದಲೇ ತೂರಿ ಬರುವ,
ಆ ನಗುವಂತು ಸಹಿಸಲಾಗದು,
ರಣವಾಗಿಹುದು ಎದೆಯ ಗಾಯ!

Thursday, October 23, 2008

ಕಡೆಯಾದೆ!


ಅವಳೇರುವ ಎತ್ತರಕ್ಕೆ
ಏಣಿಯಾದೆ.
ಎತ್ತರದಲಿ ನಿಂತಮೇಲೆ
ನಾ ಬೆಡವಾದೆ.
ಕಾಲ ಧೂಳಿಗಿಂತಲೂ,
ಕಡೆಯಾದೆ!

Wednesday, October 15, 2008

ಮಳೆ

ಮಾಯದ ಲೋಕವೇ ಈ ಭುವಿಯು,
ಚಿತ್ತವ ಚದುರಿಸೂ ಬಣ್ಣದ ಲೋಕವು.

ಹಸಿ ಹಸಿರು ಭುವಿಯ ಒಡಲು,
ನೋಡಲು ಮೇಲೆ ಚೆಂದದ ಕಾರ್ಮುಗಿಲು.

ಬೆಳ್ಳಿಯ ಗೆರೆ ನಡುವುದು ಹೊಳೆದಿರೆ,
ಕಳೆಯಿತು ಭುವಿಗಂಟಿದ ಕೊಳೆಯು.

ಮಳೆಯೋ ಮಳೆಯೋ ಭುವಿಗಿಳಿಯಿತು.
ಬಯಸದೆ ಬಂದ ಇನಿಯನ ಪರಿಯೂ!

Monday, October 6, 2008

ಶಂಕರಣ್ಣ ನ ನೆನಪು...!


ಮೊನ್ನೆ ಸೆಪ್ಟೆಂಬರ್ ಮೂವತ್ತಕ್ಕೆ ಶಂಕರನಾಗ್ ತೀರಿ ಕೊಂಡು ೧೮ ವರ್ಷಗಳಾಗಿ ಹೋದವು.ನಂಬಲಿಕ್ಕೆ ಆಗ್ತಾ ಇಲ್ಲ, ದಿನಗಳು ಎಷ್ಟು ಬೇಗ ಹೋಗ್ತ ಇದ್ದವಲ್ಲ!ನಾನು ಎಂಟನೇ ತರಗತಿ ಯಲ್ಲಿ ಇದ್ದೆ.ಶಂಕರ್ ನಾಗ್ ಸತ್ತು ಬಿಟ್ರು ಅಂತ ಹಡಗಲಿಗೆ ಸುದ್ದಿ ಬಂತು.ಶಂಕರಣ್ಣನ ಅಭಿಮಾನಿಗಳಮುಖ ನೋಡ್ಲಿಕ್ಕೆ ಆಗಿರಲಿಲ್ಲ.ನನಗಂತೂ ಯ್ಯಾಕ್ಷನ್ ಸಿನಿಮಾಗಳ ಹೀರೋ ಇನ್ನಿಲ್ಲವಲ್ಲ ಅನ್ನಿಸಿತ್ತು.
ಕನ್ನಡಕ್ಕೆ ಮುಂದೆ ಯಾರು 'ಕರಾಟೆ ಕಿಂಗ್'?

ಸೆಪ್ಟೆಂಬರ್ ಮೂವತ್ತು ೧೯೯೦ ಕ್ಕೆ ಕನ್ನಡದ ಒಬ್ಬ ಧೈರ್ಯ ವಂತ,ಎಂಟೆದೆ ಬಂಟ,ಕರಾಟೆ ಕಿಂಗ್, 'ಮಾಲ್ಗುಡಿ ಡೇಸ್' ನ ನಿರ್ದೇಶಕ,ಒಬ್ಬ ಅಧ್ಬುತ ದೂರದೃಷ್ಟಿ ನಾಯಕ ಇನ್ನಿಲ್ಲವಾಗಿದ್ದ.ಕೇವಲ ಕನ್ನಡದಕ್ಕೆ ಅಲ್ಲದೆ, ದೇಶ ದ ಹಿನ್ನೆಲೆಯಲ್ಲಿ ಒಬ್ಬ ಅದ್ಭುತ ನಿರ್ದೇಶಕ, ಕನ್ನಡ ಮತ್ತು ಮರಾಠಿ ರಂಗ ಭೂಮಿ ಒಬ್ಬ ಕ್ರೀಯಾಶೀಲ ನಿರ್ದೇಶಕನ್ನ ಕಳೆದು ಕೊಂಡಿತ್ತು. ಶಂಕರಣ್ಣ ಕೇವಲ ಯ್ಯಕ್ಷನ್ ಕಿಂಗ್ ಮಾತ್ರ ಆಗಿರಲಿಲ್ಲ.ಅವನೊಬ್ಬ ಹೊಸ ತನದ ಹಂಬಲ ಹೊತ್ತ ದಿಗ್ದರ್ಶಕನಾಗಿದ್ದ.ಶಂಕರಣ್ಣ ಗೆ ಕನ್ನಡ ಚಿತ್ರ ರಂಗ ದಲ್ಲಿ ಎರೆಡು ಬಯಕೆ ಗಳಿದ್ದವು.ಒಂದು ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವುದು ಮತ್ತೊಂದು ಪುಟ್ಟಣ್ಣ ನವರ ನಿರ್ದೇಶನದಲ್ಲಿ ಕೆಲಸ ಮಾಡುವುದು.ಮೊದಲನೆಯದು ಸಾಕರ ಗೊಂಡಿತು.ಆದರೆ ಎರೆಡೆನೆಯದಕ್ಕೆ ಕಾಲ ಕೂಡಿ ಬರಲಿಲ್ಲ.
ಶಂಕರಣ್ಣ ಸತ್ತು ಹೋಗಿದ್ದಾನೆ ಅಂತ ಯಾರು ಹೇಳಿದ್ದು?ಪ್ರತಿ ಆಟೋ ಡ್ರೈವರ್ ನ ಹೃದಯದಲ್ಲೊ ಅವನು ಇನ್ನೂ ಇದ್ದಾನೆ.ರಂಗಶಂಕರ ದ ಪ್ರತಿ ಪ್ರಯೋಗಗಳನ್ನು ಅಲ್ಲಿ ಗಡ್ಡ ನೇವರಿಸುತ್ತಾ ನೋಡುತ್ತಾ ನಿಂತಿದ್ದಾನೆ.ನನ್ನಂತಹ ಇನ್ನೂ ಎಷ್ಟೊ ಕನಸು ಕಾಣುವವರಿಗೆ ಅವನೇ ರೋಲ್ ಮಾಡೆಲ್ ಆಗಿದ್ದಾನೆ.ನಮ್ಮೆಲ್ಲರ ಬಾಲ್ಯ ದ ನೆನಪುಗಳ ನ್ನು ಕೆದಕಿ ಎಲ್ಲೊ ಒಂದು ಕಡೆ ಹಳೆ ಕಡತಗಳನ್ನು ತೆರೆಯುವಂತೆ ಮಾಡಿದ್ದ 'ಮಾಲ್ಗುಡಿ ಡೆಸ್' ನಲ್ಲಿ ಶಂಕರಣ್ಣ ಇದ್ದಾನೆ. ಶಂಕರಣ್ಣ ನೀ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದೀಯಾ.ನನ್ನ ಕಥೆ ಗಳಲ್ಲಿ,ನಮ್ಮ ಮೆಟ್ರೂ ಪ್ರೊಜೆಕ್ಟ್ ನಲ್ಲಿ,ಬದುಕಿನ ಆಸಕ್ತಿಗಳಲ್ಲಿ,ಓಟದಲ್ಲಿ,ಆತೀವ ಉತ್ಸಾಹದಲ್ಲಿ,ಕನಸುಗಳಲ್ಲಿ,ಕನವರಿಕೆಗಳಲ್ಲಿ....

Friday, October 3, 2008

'ಒಂದು ಕಪ್ ಹಾಲು' (ಸಣ್ಣ ಕಥೆ)

ಅಂದು ಬೆಳಗ್ಗಿನಿಂದಲೇ ಉಪವಾಸ ವಿದ್ದಿದ್ದರಿಂದಲೇ ಏನೋ,ನೀಲಕಂಠ ನಿಗೆ ಏನೋ ಒಂದು ತೆರೆನಾದ ಸಂಕಟ.ಕೆಲಸದ ಒತ್ತಡದಲ್ಲಿ ಬರೀ ಕಾಫಿ ಮತ್ತು ಚಹಾ ಬಿಟ್ಟರೆ ಗಂಟಲಿಗೆ ಏನೂ ಇಳಿದಿರಲಿಲ್ಲ.ಮೊದಲೇ ನಿರ್ಧೆಶಕ ನ ಜವಾಬ್ದಾರಿ.ಅದು ಈ ದಾರವಾಹಿಗೆ ಪ್ರಾಯೋಜಕರಾಗುರುವರು ಕನ್ನಡ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕರು.ಹೀಗಾಗಿ ಈ ದಾರವಾಹಿ ಯು ನೀಲಕಂಠ ನಿಗೆ ಬಹು ಮುಖ್ಯವಾಗಿತ್ತು.ಈ ದಾರವಾಹಿ ಯಲ್ಲಿ ಕೊಂಚ ಹೆಸರು ಗಳಿಸಿದರು ಈಗಿರುವ ಹೆಸರಿಗೆ ಅದೂ ಸೇರಿ ಖಂಡಿತಾ 'ಬೆಳ್ಳಿತೆರೆ' ಗೆ ಕಾಲಿರಸಬಹುದು ಎನ್ನುವ ಲೆಕ್ಕಚಾರ ಅವನದಾಗಿತ್ತು.
ಇದೆಲ್ಲವನ್ನು ಮನದಲ್ಲಿರಿಸಿಕೊಂಡು ಅವನು ಸಿದ್ಧಪಡಿಸಿದ ಚಿತ್ರಕಥೆ ಯನ್ನು ನಿರ್ದೇಶನಕ್ಕೆ ಅಣಿಮಾಡದೆ ತಾನೆ ಕುಳಿತು ಸಾಕಷ್ಟು ಓದು,ಮಾಹಿತಿಗಳನ್ನು ಕಲೆ ಹಾಕಿ,ಮನುಷ್ಯನ ಹುಟ್ಟಿನ ಮೂಲ,ಸಂಬಂಧಗಳ ಎಳೆ,ಅವರ ನಡುವಳಿಕೆಗಳು..ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ ಬರೆಯಲು ಕುಳಿತ. ಬರೆಯುವ ಭಾಗಗಳನ್ನು ಮುಗಿಸಿದ ಮೇಲೆ ಹಂತ ಹಂತವಾಗಿ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ.
ಕಥೆ ಹಂದರ ತಲೆಯಲ್ಲಿ ಸಿದ್ಧವಾಗಿತ್ತು.ಆ ಕಥೆ ಮೇಲಿ ತಿಳಿಸಿದ ಹರವನ್ನೂ ಒಳಗೊಂಡಿತ್ತು.ಅದಿಸ್ಟಲ್ಲದೆ ಬದುಕು,ಇಲ್ಲಿನ ಸಂಭ್ರಮ-ಸಡಗರ,ಬದುಕಲ್ಲಿನ ಅನೀರಿಕ್ಷೀತ ತಿರುವು,ಅಘಾತ -ಇವೆಲ್ಲವನ್ನೂ ಬಳಸಿ ಬೆಳೆದಿತ್ತು.ಇನ್ನೂ ಅವನಿಗೆ ಉಳಿದಿದ್ದು ದರವಾಹಿ ಯ ಹೆಸರು: ಅದಕ್ಕೆ ಅವನು ಅಲೋಚಿಸಿ ಇಟ್ಟ ಹೆಸರು - 'ಇಷ್ಟೇ ಅಲ್ಲಾ...!'.
ಆ ದಿನ ರಾತ್ರಿ ಮನೆಗೆ ಬರು ಹೊತ್ತಿಗೆ ಸುಮಾರು ಹನ್ನೊಂದು ವರೆ ಆಗಿತ್ತು.ಬೆಳಿಗ್ಗೆ ಆರು ಗಂಟೆಗೆ ಮನೆ ಬಿಟ್ಟವನು ನಡು ರಾತ್ರಿ ಮನೆಗೆ ಹಿಂತುರಿಗಿದ್ದ. ಕಾರಲ್ಲಿ ಬರುತ್ತಿರುವಾಗಲೇ ಸಂಕಟ ಅತಿಯಾಗಿತ್ತು. ದಾರಿಯುದ್ದಕ್ಕೂ ಎಲ್ಲರಿಗೂ ಮನೆಗೆ ಹೋಗುವ ಆತುರ.ಟ್ರಾಫಿಕ್ ಸಿಗ್ನಲ್ ಇದೆಯೂ ಇಲ್ಲವೂ ಅದ್ಯಾವುದನ್ನೂ ನೋಡದೇ ಒಟ್ಟಾಗಿ ಎಲ್ಲರೂ ಓಡಿದ್ದೇ ಓಡಿದ್ದು.
ಇಡೀ ಬೆಂಗಳೂರೇ ನಿದ್ರೆ ಗೆ ಜಾರುವ ಸಮಯ.ಮುಂಜಾವಿನಿಂದ ಪ್ರತಿ ದಾರಿ ಹೋಕರಿಗೂ ಮೈಯೊಡ್ಡಿ ಇನ್ನು ಆಗಲಾರದು ಎನ್ನುವಂತೆ ರಸ್ತೆಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸುವಂತೆ ಮಲಗಿದ್ದವು.ಮುಖ್ಯ ರಸ್ತೆಗಳಲ್ಲಿ ಸುಮರಾಗಿ ವಾಹನಗಳು ಕಂಡುಬಂದರೂ ಬಡವಾಣೆ ಪ್ರವೇಶಿಸಿತಿದ್ದಂತೆಯೇ ಕತ್ತರಿ ರಸ್ತೆ ಗಳಲ್ಲಿ ಆಗಸಕ್ಕೆ ಮುಖಮಾಡಿ ನಾಲ್ಕು ದಾರಿಗಳಿಗೂ ಬೆಳಕ ಚೆಲ್ಲಿ ನಿಂತ ಹ್ಯಾಲೋಜನ್ ನ ಮಬ್ಬುಗತ್ತಲು.ಹಾದಿ ತಪ್ಪಿ ಬರುವಂತೆ ಕಾಣುವ ನಾಯಿಗಳು.ಬದುಕಲ್ಲಿ ಏನೆ ಬರಲಿ ಕೇವಲ ಹುಂಬ ಧೈರ್ಯದಿಂದಲೇ ಎದುರಿಸುತ್ತೇನೆ ಎನ್ನುವಂತೆ ಕಾಣುತ್ತಿರುವ ಕೇವಲ ಲಾಠಿ ಹಿಡಿದ ಪೋಲಿಸರನ್ನು ಬಿಟ್ಟರೆ ದಾರಿಯಲ್ಲಿ ಯಾವ ನರ ಪಿಳ್ಳೆ ಯೂ ಇಲ್ಲ.ಮನೆಯ ತಿರುವಿಗೆ ಬರವಷ್ಟರಲ್ಲಿ ಮಬ್ಬುಗತ್ತಲು ಮಾಯಾವಾಗಿ ಮನೆಗಳ ಕಿಟಕಿ ಗಳಿಂದ ಹೊರಬರುತಿದ್ದ ರಾತ್ರಿ ದೀಪದ ಬೆಳಕು ಮಾತ್ರ ಇತ್ತು.ರಸ್ತೆಯ ನಾಯಿಗಳು "ಯಾರಿದು...?" ಅಂತ ತಲೆ ಎತ್ತಿ ನೋಡಿ," ಅಯ್ಯೂ ಇವ ನಮ್ಮವ !" ಅನ್ನುವಂತೆ ತಲೆಯನ್ನು ಮತ್ತೆ ಭೂಮಿಗೆ ಹಾಕಿ ಮಲುಗಿದವು.ಮನೆಯ ಬಾಗಿಲು ತೆರೆಯುವಷ್ಟರಲ್ಲಿ 'ಸಂಕಟ' ತಾರಕಕ್ಕೇರಿತ್ತು. ಮನೆಯಲ್ಲಾ ತಡಕಾಡಿದ.ತಂದಿಟ್ಟಿದ್ದ ಬ್ರೆಡ್, ಹಣ್ಣು..ಎಲ್ಲವೂ ಮುಗಿದು ಹೋಗಿತ್ತು.ಆದರೆ ರೆಫ್ರಿಜೇಟರ್ ನಲ್ಲಿ ಹಾಲು ಮಾತ್ರ ಇತ್ತು.
****************************
ಹಾಲಿನ ಬಟ್ಟಲಿನಿಂದ ಒಂದಿಷ್ಟು ಹಾಲನ್ನು ಮತ್ತೊಂದು ಚಿಕ್ಕ ಬಟ್ಟಲಿಗೆ ಬಗ್ಗಿಸಿ ಬಿಸಿ ಮಾಡಲು ಗ್ಯಾಸ್ ಸ್ಟೋವ್ ಮೇಲೆ ಇಟ್ಟ.ಆ ಹೊತ್ತಿಗಾಗಲೇ ತಲೆ ಸಿಡಿತಾ ಇತ್ತು.
"ಹಸಿವೆ ಯಿಂದ ಇರಬೇಡ್ವೂ ಸಂಕಟನೂ ಹೆಚ್ಚಾಗುತ್ತೆ ಮತ್ತೆ ತೆಲೆ ನೋವು ಶುರುವಾಗುತ್ತೆ.."
ಸುಧಾ ಹೇಳುತಿದ್ದ ಮಾತು ನೆನಪಾಯಿತು.ಮನೆಯಲ್ಲಿ ಯಾರು ಇಲ್ಲದ್ದರಿಂದಲೋ ಎನೋ, ಮನೆ ಬಿಕೋ ಎನ್ನುತ್ತ ಇತ್ತು, ಮನಸ್ಸು ಅಯೋ ಮಯವಾಗಿತ್ತು.ತಲೆ ನೋವು ವಿಪರೀತವಾಗಿ ಕಾಡಲು ಶುರುವಾಯಿತು.ಮಲಗುವ ಕೋಣೆಯ ಅಲಮಾರದಲ್ಲಿದ್ದ ಸಂಗೀತಾ ಳ ದುಪ್ಪಟ್ಟ ತೆಗೆದು ತೆಲೆಗೆ ಬಿಗಿದ.ಕೈ ಗೆ ಹಿಡಿತ ಸಿಗಲಿಲ್ಲ.
"ಇಲ್ಲಿ ಬಿಡು ನಂಗೆ,ನಾನು ಕಡ್ತೇನೆ " ತನ್ನದೇ ದುಪಟ್ಟವನ್ನು ಒಮ್ಮೆ ಗಟ್ಟಿಯಾಗಿ ಸುಧಾ ಬಿಗಿದಿದ್ದಿಳು.ಮತ್ತೊಮ್ಮೆ ಸುಧಾಳ ಮಾತು ನೆನಪಾಗಿತ್ತು.ಈಗಂತೂ ತಡೆಯಲಾಗಲಿಲ್ಲ.ತೆಳ್ಳಗೆ ಹನಿಗಳು ಕಣ್ಣಲ್ಲಿ ಸಾಲುಗಟ್ಟಿದ್ದವು.ಮನಸು ಯಾವುದೋ ಕಳೆದು ಹೋದ ಅನನ್ಯ ವಸ್ತುವಿಗೆ ವಿಲ ವಿಲ ಒದ್ದಾಡಿತ್ತು.
ಹಾಲು ಉಕ್ಕೇರಿ ಬಂತು.ಅದಕ್ಕೂಂದಿಷ್ಟು ಸಕ್ಕರೆ ಹಾಕಿ ಚಿಕ್ಕದೊಂದು ಕಪ್ ಗೆ ಸುರಿದ.ಆ ಹೊತ್ತಿಗಾಗಲೇ ಗಡಿಯಾರದಲ್ಲಿ ಗಂಟೆ ಒಂದಾಗಿತ್ತು.ರಾಜ್ ಕಪೂರ್ ಹಿಟ್ಸ ನ ಗೀತೆಗಳ ಒಂದು ಸಿಡಿ ಯನ್ನು ಸಿಸ್ಟಮ್ ಗೆ ಸಿಕ್ಕಿಸಿ ಮೆಲ್ಲಗೆ ವಾಲ್ಯೂಮ್ ಇಟ್ಟನು.
ತಲೆ ನೋವು ಮತ್ತು ಸಂಕಟಗಳೆರೆಡು ವಿಪರೀತವಾಗಿತ್ತು.ಕೈಲಿದ್ದ ಹಾಲಿನ ಕಪ್ ನ್ನು ತುಟಿಗೆ ಸೇರಿಸಿ ಒಂದು ಗುಟುಕನ್ನು ಹೀರುವಷ್ಟರಲ್ಲು ಮನಸ್ಸು ಎಲ್ಲೊ ತಿರುಗುತಿತ್ತು.ಆದರೂ ಹೊಟ್ಟೆ ತಣ್ಣಾಗಗಿತ್ತು. ಆದರೆ ಮನಸ್ಸು ಅಶಾಂತಿಯಿಂದಲೇ ನಲುಗಿತ್ತು.
"..ಮೈ ಆವಾರ ಹೂಂ...ಆವಾರ ಹೂಂ..." ಮುಖೆಶ್ ಜಿ ಯ ಮಧುರ ಕಂಠಸಿರಿ ಯಿಂದ ಹಾಡು ಹರಿಯ ತೊಡಗಿತ್ತು.ಹಾಗೆ ಗುಟುಕಿನ ಮೇಲೆ ಗುಟುಕು ಹಾಲು ಕುಡಿಯುವ ಹೊತ್ತಿಗೆ ಮನಸ್ಸು ಮಾತಾಡ ತೊಡಗಿತು.
" ಸುಧಾಳನ್ನು ಪ್ರೀತಿ ಮಾಡಿದ್ದು ಏಕೆ?"
"ಸುಧಾಳನ್ನು ಬಿಟ್ಟಿದ್ದು ಏಕೆ?"
"ಸಂಗಿತಾಳನ್ನು ಮದುವೆಯಾಗಿದಿನಿ ಇನ್ನಾದರೂ ಸುಧಾ ಳ ನೆನಪು ಬರಬಾರದು"
ಇವೆಲ್ಲವೂ ಕೇವಲ ಅವನಿಗೆ ಪ್ರೆಶ್ನೆಗಳಾಗಿರಲಿಲ್ಲ.ಅವೆಲ್ಲವೂ ಬದುಕಿನ ಪ್ರಮುಖ ನಿರ್ಧಾರಗಳ ಮೂಲ ವನ್ನೇ ಕೆದಕಿತ್ತು.
ಸುಮಾರು ಹತ್ತು ವರ್ಷದ ಹಿಂದೆ ಸಂಗೀತಾಳನ್ನು ಮದುವೆ ಯದಾಗ ಸಂಭ್ರಮ ವೆನೋ ಇತ್ತು.ಆದರೆ ಎಲ್ಲೂ ಓಂದು ಕಡೆ ಎಲ್ಲವನ್ನು ಸಂಗೀತಾಳ ಮುಂದೆ ಹೇಳಿಕೊಳ್ಳಬೇಕೆನ್ನಿಸುತ್ತಿತ್ತು. ಆದರೆ ಕಾಲ ಕೂಡಿ ಬರಲಿಲ್ಲ.ಈಗ ಅವರಿಬ್ಬರಿಗೂ ಆರು ವರ್ಷದ ಮಗು 'ಕೃಷ್ಣ'.ಸಂಸಾರ ಚೆಂದಾಗಿದೆ.ಸಂಗಿತಾಳು ಅಷ್ಟೆ.ಹೀಗೆ ಯಾವತ್ತಾದರೂ ಒಂಟಿಯಾಗಿದ್ದಾಗ ಹಳೆಯ ನೆನಪುಗಳು ಅವನ್ನು ಕೊರೆಯಲಿಕ್ಕೆ ಶುರು ಮಾಡುತ್ತಿದ್ದವು.
ಕಪ್ ನಲ್ಲಿದ್ದ ಹಾಲು ಮುಗಿತಾ ಬಂತು.ಆದ್ರೆ ಸಂಕಟ ಹಾಗೆ ಇತ್ತು.ನಿಲಕಂಠ ನಿಗೆ ಅಮ್ಮ ಹೇಳುತಿದ್ದ ಮಾತು ನೆನಪಿಗೆ ಬಂತು " ಒಂದು ಕಪ್ ಹಾಲು ಕುಡಿ ಸಂಕಟವಿದ್ದರೆ,ಕಡಿಮೆ ಯಾಗುತ್ತೆ...".ಹಾಲೂ ಕುಡಿದಾಗಿತ್ತು,ಆದ್ರೆ ಸಂಕಟ ಹಾಗೇ ಇತ್ತು.